ಆಮದುಗಳು-
ಬಳಕೆಗಾಗಲಿ, ಬೇರೆ ಪದಾರ್ಥಗಳ ತಯಾರಿಕೆಗಾಗಲಿ ಅಗತ್ಯವಾದ ವಸ್ತುಗಳನ್ನು ಹೊರ ದೇಶದಿಂದ ತರಿಸಿಕೊಳ್ಳುವುದಕ್ಕೆ ಆಮದು ವ್ಯಾಪಾರವೆಂದು ಹೆಸರು. ಹಾಗೆ ತರಿಸಿದ ಪದಾರ್ಥಗಳನ್ನು ಆಮದು ಪದಾರ್ಥಗಳು ಎನ್ನುತ್ತಾರೆ. ರಫ್ತು ವ್ಯಾಪಾರ, ರಪ್ತು ಪದಾರ್ಥಗಳು ಇದಕ್ಕೆ ತದ್ವಿರುದ್ಧವಾದವು. ಆಮದಿನಿಂದ ದೇಶದ ಸಂಪನ್ಮೂಲಗಳ ಬೆಳವಣಿಗೆಯಾಗುತ್ತದೆ. ಇದಲ್ಲದೆ ಬೇರೆ ಕಾರಣಗಳಿಂದ ದೇಶದೊಳಕ್ಕೆ ಬರುವ ವಸ್ತುಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ, ವ್ಯಕ್ತಿಗಳ ಉಪಯೋಗಕ್ಕಾಗಿ, ಪ್ರದರ್ಶನಕ್ಕಾಗಿ, ನಿಯೋಗಿಗಳ ಮತ್ತು ವಿದೇಶೀ ಸೇನಾಠಾಣ್ಯಗಳ ಬಳಕೆಗಾಗಿ ತರಿಸಿಕೊಳ್ಳುವ ಪದಾರ್ಥಗಳು ಆಮದು ಪದಾರ್ಥಗಳಾಗುವವು. ಆದರೆ ಸಂಪನ್ಮೂಲಗಳನ್ನು ಹೆಚ್ಚಿಸಲು ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಯಂತ್ರೋಪಕರಣಾದಿಗಳು ಅಗತ್ಯ. ರಾಸಾಯನಿಕಾದಿಗಳು, ತಜ್ಞರ ಸೇವೆ ಮೊದಲಾದವು ಆಮದು ಎನಿಸಿಕೊಳ್ಳುತ್ತವೆ. 	
ಪ್ರತಿ ರಾಷ್ಟ್ರವೂ ಸ್ವಾವಲಂಬಿಯಾಗಿರುವುದು ಸಾಧ್ಯವಿಲ್ಲದ ಮಾತು. ಒಂದಲ್ಲೊಂದು ಸರಕು ಅಥವಾ ಸೇವೆ ಅಥವಾ ಬಂಡವಾಳಕ್ಕೆ ಒಂದು ರಾಷ್ಟ್ರ ಮತ್ತೊಂದನ್ನು ಅವಲಂಬಿಸಲೇಬೇಕು. ಇದಕ್ಕೆ ನೈಸರ್ಗಿಕ ಕಾರಣಗಳಿರಬಹುದು. ಅಥವಾ ಬೇರೆ ಯಾವುದಾದರೂ ಕಾರಣಗಳಿರಬಹುದು. ಪಾಶ್ಚಾತ್ಯ ರಾಷ್ಟ್ರಗಳು ಅರಬ್ ರಾಷ್ಟ್ರಗಳನ್ನು ತೈಲಕ್ಕಾಗಿ ಅವಲಂಬಿಸಬೇಕು. ಇಲ್ಲದಿದ್ದರೆ ಅವರ ಕೈಗಾರಿಕೆಗೆ ಪೆಟ್ಟು ಬೀಳುತ್ತದೆ. ಹಿಂದುಳಿದ ರಾಷ್ಟ್ರಗಳು ನವೀನ ಯಂತ್ರೋಪಕರಣಗಳನ್ನು ಮುಂದುವರಿದ ರಾಷ್ಟ್ರಗಳಿಂದ ಕೊಳ್ಳದಿದ್ದರೆ ಅಭಿವೃದ್ಧಿಯನ್ನು ಸಾಧಿಸುವುದು ಸಾಧ್ಯವಿಲ್ಲ. ಹಾಗೆಯೇ ಆಹಾರ ವಸ್ತುಗಳ ಕೊರತೆ ಇರುವುದರಿಂದ ಮುಂದುವರೆದ ರಾಷ್ಟ್ರಗಳಿಂದ ಅವುಗಳನ್ನು ಕೊಂಡುಕೊಳ್ಳದಿದ್ದರೆ ಆಹಾರ ಸಮಸ್ಯೆ ಭೀಕರ ಸ್ವರೂಪವನ್ನು ತಾಳುತ್ತದೆ.

	ಅಂತರರಾಷ್ಟ್ರೀಯ ವ್ಯಾಪಾರದ ಮುಖ್ಯ ಸಿದ್ಧಾಂತವಾದ ತಾರತಮ್ಯ ವೆಚ್ಚ ಸಿದ್ಧಾಂತ (ಥಿಯರಿ ಆಫ್ ಕಂಪ್ಯಾರಿಟಿವ್ ಕಾಸ್ಟ್ಸ್) ತಿಳಿಸುವಂತೆ ಪ್ರತಿ ರಾಷ್ಟ್ರವೂ ಯಾವ ವಸ್ತುಗಳ ತಯಾರಿಕೆಗೆ ಹೆಚ್ಚು ಅನುಕೂಲ ಹೊಂದಿದೆಯೋ ಅಥವಾ ಯಾವ ವಸ್ತುಗಳನ್ನು ಬೇರೆಯವರಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಲು ಶಕ್ಯವಾಗಿದೆಯೋ ಅಂಥ ವಸ್ತುಗಳನ್ನು ತಯಾರಿಸುವುದರಲ್ಲಿ ಮಾತ್ರ ವೈಶಿಷ್ಟ್ಯಗಳಿಸಿಕೊಳ್ಳಬೇಕು. ಉಳಿದವುಗಳನ್ನು ಯಾವ ರಾಷ್ಟ್ರಗಳು ತಮಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಲು ಶಕ್ಯವಾಗಿದೆಯೋ ಅವುಗಳಿಂದ ಕೊಳ್ಳಬೇಕು. ಉದಾಹರಣೆಗೆ, ಕಾಫಿ ಬೆಳೆಗೆ ಅನುಕೂಲವಾದ ಹವೆ ಇಲ್ಲದಿರುವ ದೇಶಗಳಲ್ಲಿ ಕೃತಕವಾಗಿ ಅದಕ್ಕೆ ತಗಲುವ ವೆಚ್ಚ ಅತಿಯಾಗುವುದರಿಂದ ಅದಕ್ಕೆ ಬದಲು ಎಲ್ಲಿ ಕಡಿಮೆ ವೆಚ್ಚದಲ್ಲಿ ಬೆಳೆಯಲು ಸಾಧ್ಯವೋ ಅಲ್ಲಿಂದ ಕೊಳ್ಳುವದೇ ಲೇಸು. ಈ ಕಾರಣಗಳಿಂದ ಸರಕುಗಳ ಆಮದು ಅನಿವಾರ್ಯ.

	ಅಂತೆಯೇ ಸೇವೆಗಳ ಆಮದೂ ಎಷ್ಟೋ ವೇಳೆ ಅನಿವಾರ್ಯ. ಇತರ ದೇಶಗಳ ಜನರ ತಾಂತ್ರಿಕ ಸೇವೆಯನ್ನು ಪಡೆದುಕೊಳ್ಳಬೇಕಾಗಬಹುದು. ಇಲ್ಲವೇ ಇತರ ದೇಶಗಳ ಸಾರಿಗೆ ಸಂಸ್ಥೆಗಳ ಸೇವೆಯನ್ನು ಪಡೆದುಕೊಳ್ಳಬೇಕಾಗಬಹುದು. 

	ಬಂಡವಾಳವನ್ನು ಆಮದು ಮಾಡಿಕೊಳ್ಳುವುದೂ ಬಹಳ ಕಾಲದಿಂದಲೂ ರೂಢಿಯಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ಇದರ ಪ್ರಾಮುಖ್ಯ ಹೆಚ್ಚುತ್ತಿದೆ. ಇಂದು ಸಂಪತ್ಸಮೃದ್ಧವಾಗಿರುವ ಅಮೆರಿಕ ಬಹಳ ಕಾಲದವರೆಗೆ ಬಂಡವಾಳವನ್ನು ಆಮದು ಮಾಡಿಕೊಳ್ಳುತ್ತಿದ್ದು ಅನಂತರ ಬಂಡವಾಳವನ್ನು ರಫ್ತು ಮಾಡುವ ಮಟ್ಟವನ್ನು ಮುಟ್ಟಿತು. ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಬಂಡವಾಳ ಹೂಡುವಿಕೆಗೆ ಬೇಕಾಗುವಷ್ಟು ಉಳಿತಾಯವಿಲ್ಲದಿರುವುದರಿಂದ ಅಭಿವೃದ್ಧಿಯನ್ನು ತ್ವರಿತಗೊಳಿಸಿ ಜನರಿಗೆ ಉತ್ತಮ ಜೀವನ ಮಟ್ಟವನ್ನೊದಗಿಸಲು ಬಂಡವಾಳವನ್ನು ಆಮದು ಮಾಡಿಕೊಳ್ಳವುದು ಅವಶ್ಯಕವಾಯಿತು.

	ಆಮದು ಒಂದು ರಾಷ್ಟ್ರದ ಲೇಣಿ ದೇಣಿ ಪಟ್ಟಿಯ (ಬ್ಯಾಲೆನ್ಸ್ ಆಫ್ ಪೇಮೆಂಟ್) ಮೇಲೆ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಪಟ್ಟಿಯು ಸರಿದೂಗುವಂತೆ ಆಮದು ಮತ್ತು ರಫ್ತುಗಳು ಸಮನಾಗಿರಬೇಕು. ರಫ್ತಿಗಿಂತ ಆಮದು ಹೆಚ್ಚಾಗಿದ್ದರೆ ಪಟ್ಟಿಯಲ್ಲಿ ಉಳಿತಾಯ ಉಂಟಾಗುತ್ತದೆ. ಇವುಗಳಲ್ಲಿ ಯಾವ ಒಂದೂ ಅಪೇಕ್ಷಣೀಯವಲ್ಲ. ಖೋತವನ್ನು ಮಾತ್ರ ಸಮಸ್ಯೆ ಎಂದು ಪರಿಗಣಿಸಿ ಉಳಿತಾಯ ಅಪೇಕ್ಷಣೀಯ ಸ್ಥಿತಿ ಎಂದು ಭಾವಿಸುವುದುಂಟು. ಆದರೆ ಸಮಸ್ಥಿತಿ ಅತ್ಯುತ್ತಮವಾದುವೆಂದು ತಿಳಿಯುವುದು ಅವಶ್ಯಕ. ಒಂದು ರಾಷ್ಟ್ರದ ಲೇಣಿ ದೇಣಿ ಪಟ್ಟಿಯಲ್ಲಿ ಉಳಿತಾಯವಿದ್ದರೆ ಬೇರೆ ಯಾವುದೋ ದೇಶ ಖೋತ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅರ್ಥ. ಆದ್ದರಿಂದ ಸಮಸ್ಯೆಗೆ ಲೇಣಿ ದೇಣಿ ಪಟ್ಟಿಯಲ್ಲಿ ಖೋತ ಎಷ್ಟರ ಮಟ್ಟಿಗೆ ಕಾರಣವೋ ಉಳಿತಾಯವೂ ಅಷ್ಟರ ಮಟ್ಟಿಗೆ ಕಾರಣ.

	ರಫ್ತಿಗಿಂತ ಆಮದು ಹೆಚ್ಚಾಗಿ ಖೋತ ಸಮಸ್ಯೆ ಉದ್ಭವಿಸಿದಾಗ ಆಮದಿನ ಮಟ್ಟವನ್ನು ಕಡಿಮೆ ಮಾಡಲು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಆಮದು ಸುಂಕ ವಿಧಿಸುವುದರ ಮೂಲಕ ಆಮದು ವಸ್ತುಗಳ ಬೆಲೆ ಹೆಚ್ಚುವಂತೆ ಮಾಡಿ ಅವುಗಳ ಪ್ರಮಾಣವನ್ನು ಇಳಿಸುವುದು ಆಮದು ನಿರ್ಬಂಧ ಕ್ರಮಗಳಲ್ಲೊಂದು. ಆದರೆ ಇದು ಪರಿಣಾಮಕಾರಿಯಾಗಬೇಕಾದರೆ ಬೆಲೆ ಏರಿದಂತೆ ಬೇಡಿಕೆ ಕಡಿಮೆಯಾಗಬೇಕು. ಹಾಗಲ್ಲದಿದ್ದರೆ ಬೆಲೆ ಏರಿದರೂ ಆಮದು ಪ್ರಮಾಣ ಕಡಿಮೆಯಾಗುವುದಿಲ್ಲ. ಆಮದು ಪಾಲನ್ನು (ಕೋಟ) ನಿಗದಿ ಮಾಡಿ, ಗೊತ್ತಾದ ಮಿತಿಯನ್ನು ಮೀರಿ ಆಮದು ಮಾಡಿಕೊಳ್ಳದಂತೆ ತಡೆಯುವುದು ಮತ್ತೊಂದು ಆಮದು ನಿರ್ಬಂಧಕ ಕ್ರಮ. ಈ ಎರಡು ಕ್ರಮಗಳ ಪೈಕಿ ಆಮದು ಪಾಲು ನಿಗದಿ ಮಾಡುವುದು ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿದೆ. ವಿನಿಮಯದ ದರಗಳಲ್ಲಿ ತಾರತಮ್ಯ ಮಾಡುವುದರ ಮೂಲಕವೂ ಆಮದು ನಿರ್ಬಂಧ ಸಾಧ್ಯ. ಆನಾವಶ್ಯಕ ಆಮದುಗಳಿಗೆ ಬೇಕಾಗುವ ವಿದೇಶೀ ವಿನಿಮಯದ ಬೆಲೆಯನ್ನು ಹೆಚ್ಚಿಸಿ ಅವುಗಳ ಆಮದನ್ನು ಕಡಿಮೆಮಾಡಿಕೊಳ್ಳಬೇಕಾದ ವಸ್ತುಗಳಿಗೆ ಸರಿಸಮವಾದ ವಸ್ತುಗಳನ್ನು ದೇಶದಲ್ಲಿಯೇ ತಯಾರಿಸಿಕೊಳ್ಳಲು ಯತ್ನಿಸುವ ಕಡೆಗೆ ಹೆಚ್ಚು ಗಮನ ಕೊಡುವುದು ಅವಶ್ಯಕ. ಭಾರತದಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾಗುತ್ತಿರುವಾಗ ವಿದೇಶದಿಂದ ಆಮದಾಗುತ್ತಿದ್ದ ಅನೇಕ ಪದಾರ್ಥಗಳಿಗೆ ಸರ್ಕಾರ ಅನುಜ್ಞಾಪತ್ರ ಕೊಡುವುದನ್ನು ನಿಲ್ಲಿಸಿತು. ಆಮದಾಗುವ ಪದಾರ್ಥಗಳಲ್ಲಿ ಕೆಲವದರ ಮೇಲೆ ಹೆಚ್ಚು ಸುಂಕ ಹೇರಿತು. ಹಾಗೆ ಮಾಡಿದರೆ ವ್ಯಾಪಾರದ ಪೈಪೋಟಿಯನ್ನು ಎದುರಿಸುವುದು ಕಷ್ಟವಾಗುತ್ತಿತ್ತು.

	ಒಂದು ರಾಷ್ಟ್ರದ ಆಮದು ಪ್ರಮಾಣ, ಆ ರಾಷ್ಟ್ರ ಅಭಿವೃದ್ಧಿಯ ಯಾವ ಹಂತದಲ್ಲಿದೆಯೆಂಬುದನ್ನು ಬಹುಮಟ್ಟಿಗೆ ಅವಲಂಬಿಸಿರುತ್ತದೆ. ಅಭಿವೃದ್ಧಿಯ ಪ್ರಾರಂಭದ ಹಂತದಲ್ಲಿರುವ ರಾಷ್ಟ್ರವೂ ಯೋಜನಾಬದ್ದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುವುದರಿಂದ ಯಂತ್ರೋಪಕರಣಗಳು, ತಾಂತ್ರಿಕ ನೆರವು ಮತ್ತು ಅನೇಕ ವೇಳೆ ಅಹಾರ ವಸ್ತುಗಳನ್ನೂ ಅನ್ಯದೇಶಗಳಿಂದ ಪಡೆಯಬೇಕಾಗುತ್ತದೆ. ರಾಷ್ಟ್ರದ ಅಭಿವೃಧ್ಧಿ ಮುಂದುವರಿದಂತೆ ಇವುಗಳ ಅವಶ್ಯಕತೆ ಕಡಿಮೆಯಾಗಿ ಆಮದಿನ ಮಟ್ಟ ಕಡಿಮೆಯಾಗುತ್ತದೆ. ಅಂತರರಾಷ್ಟ್ರೀಯವಾಗಿ ವ್ಯಾಪಾರ ಸೌಹಾರ್ದಯುತವಾಗುವಂತೆ ಮಾಡಲು ಅನೇಕ ಸಂಸ್ಥೆಗಳನ್ನು ಈಚೆಗೆ ಸ್ಥಾಪಿಸಲಾಗಿದೆ. ವಿವರಗಳಿಗೆ

(ನೋಡಿ- ಅಂತರರಾಷ್ಟ್ರೀಯ-ಅಭಿವೃದ್ಧಿ-ಸಂಸ್ಥೆ)
(ನೋಡಿ- ಅಂತರರಾಷ್ಟ್ರೀಯ-ಆರ್ಥಿಕ-ಮಂಡಲಿ)
(ನೋಡಿ- ಅಂತರರಾಷ್ಟ್ರೀಯ-ತೀರುವೆ-ಬ್ಯಾಂಕು)
(ನೋಡಿ- ಅಂತರರಾಷ್ಟ್ರೀಯ-ಪುನರ್ರಚನೆ-ಮತ್ತು-ಅಭಿವೃದ್ಧಿ-ಬ್ಯಾಂಕು)
(ನೋಡಿ- ಅಂತರರಾಷ್ಟ್ರೀಯ-ದ್ರವ್ಯನಿಧಿ)
(ನೋಡಿ- ಅಂತರರಾಷ್ಟ್ರೀಯ-ವ್ಯಾಪಾರ)
(ನೋಡಿ- ಅತಿಸವಲತ್ತು-ಪಡೆದ-ರಾಷ್ಟ್ರ-ವ್ಯವಹಾರ)					(ಬಿ.ಎಸ್.ಎಸ್.ಎ.)

	ವ್ಯವಹಾರಗಳ ವಿಧಾನ : ಸರ್ಕಾರ, ಜಹಜಿನ ಕಂಪನಿ ಮತ್ತು ಬಂದರು ಅಧಿಕಾರಿಗಳು ವಿಧಿಸುವ ಕೆಲವು ನಿಯಮಾವಳಿಗನುಸಾರವಾಗಿ ಆಮದು ವ್ಯಾಪಾರ ನಡೆಯಬೇಕು. ಮೊದಲನೆಯದಾಗಿ, ಪದಾರ್ಥಗಳ ಆಮದು ಮಾಡಿಕೊಳ್ಳುವುದಕ್ಕೆ ಸರ್ಕಾರದಿಂದ ಅನುಮತಿ ಅವಶ್ಯಕ. ಅಂಥ ಅಜ್ಞಾಪತ್ರದೊಂದಿಗೆ ಆಮದು ಮಾಡಿಕೊಂಡ ಪದಾರ್ಥದ ಬೆಲೆ ಮತ್ತು ಇತರ ಅಗತ್ಯ ವಿವರಣೆಯನ್ನು ಸುಂಕದ ಅಧಿಕಾರಿಗಳಿಗೆ ಕೊಟ್ಟು ನಿಗದಿಯಾದ ಸುಂಕವನ್ನು ಪಾವತಿ ಮಾಡಿ ಪದಾರ್ಥಗಳನ್ನು ಬಿಡಿಸಿಕೊಂಡು ಹೋಗಬೇಕು. ಆಮೇಲೆ ಜಹಜಿನ ಕಂಪನಿ ಕಛೇರಿಗೆ ಹಡಗು ಬಾಡಿಗೆಯನ್ನು ತೆತ್ತು ರವಾನೆಯ ಆದೇಶವನ್ನು ಪಡೆಯಬೇಕು. ಕೆಲವು ವೇಳೆ ಆಮದು ಮಾಡಿಕೊಳ್ಳುವವ ಸರಕುಗಳನ್ನು ತಕ್ಷಣವೇ ಬಂದರಿನಿಂದ ತೆಗೆಯದೇ, ಅಧಿಕಾರಿಗಳ ವಶದಲ್ಲಿರುವ ಈಡು ಮಳಿಗೆಯಲ್ಲಿ ಶೇಖರಿಸಿ ಇಡಬಹುದು. ಆಮದು ಮಾಡಿಕೊಂಡ ಪದಾರ್ಥಗಳನ್ನು ಮತ್ತೆ ರಫ್ತು ಮಾಡಬೇಕಾದಾಗ ಸುಂಕದ ಬಾಕಿಯನ್ನು ತರಲು ಆಮದು ಮಾಡಿಕೊಳ್ಳುವವರಿಗೆ ಹಣವಿಲ್ಲದಿದ್ದಾಗ ಶೇಖರಣೆ ಮಾಡಲು ಅನುಕೂಲಗಳಿಲ್ಲದಿದ್ದಾಗ ಹೀಗೆ ಮಾಡಲಾಗುತ್ತದೆ. 

	ಆಮದು ಮಾಡಿಕೊಳ್ಳುವವರು ಸಾಧಾರಣವಾಗಿ ಅವರ ಬ್ಯಾಂಕರುಗಳಿಂದ ಸಾಲವನ್ನು ಪಡೆಯುತ್ತಾರೆ. ಬ್ರಿಟನ್ನಿನಲ್ಲಿ ಸ್ವೀಕರಣ ಸಂಸ್ಥೆಗಳು ಈ ಕಾರ್ಯವನ್ನು ನೆರವೇರಿಸುತ್ತವೆ. ವಾಷಿಂಗ್‍ಟನ್ನಿನಲ್ಲಿ ರಫ್ತು ಮತ್ತು ಆಮದಿನ ಬ್ಯಾಂಕು ಅನೇಕ ರಾಷ್ಟ್ರಗಳಿಗೆ ಆಮದು ಸಾಲವನ್ನು ನೀಡುತ್ತದೆ. ಆಮದು ವ್ಯಾಪಾರಿಗಳು ಸಾಕಷ್ಟು ಭರವಸೆ ನೀಡಿದಲ್ಲಿ ಅದರ ಬಗ್ಗೆ ಕೊಡಬೇಕಾದ ಹಣವನ್ನು ತತ್‍ಕ್ಷಣದಲ್ಲಿ ಕೊಡದೆ ಮಾಲನ್ನು ಪಡೆದು ವಾಯಿದೆಯಂತೆ ಅನಂತರ ಹಣ ಪಾವತಿ ಮಾಡುವ ಸೌಲಭ್ಯವನ್ನು ಭಾರತ ಸರ್ಕಾರ ಈಚೆಗೆ ನೀಡಿದೆ.									(ಬಿ.ಬಿ.ಕೆ.)

	ಆಮದು ಸುಂಕಗಳು: ಒಳದೇಶಗಳಲ್ಲಿನ ಉಕ್ಕಡಗಳಲ್ಲಿ ವಸೂಲು ಮಾಡುವ ಸುಂಕಕ್ಕಿಂತ ಭಿನ್ನವಾದವು. ಈಗ ದೇಶದೇಶಗಳ ನಡುವಣ ವ್ಯಾಪಾರಕ್ಕೆ ಮಾತ್ರ ಅನ್ವಯವಾಗುತ್ತವೆ. (ಟ್ಯಾರಿಫ್ : ಕಸ್ಟಮ್ಸ್). ರಫ್ತು ಸುಂಕಕ್ಕಿಂತ ಆಮದು ಸುಂಕವೇ ಈಗ ಹೆಚ್ಚು ಬಳಕೆಯಲ್ಲಿವೆ. ಬೇರೆ ದೇಶಗಳಿಂದ ಆಮದಾದ ಸರಕುಗಳ ಮೇಲೆ, ಅವುಗಳನ್ನು ದೇಶದ ಒಳಕ್ಕೆ ಒಯ್ಯುವ ಮುನ್ನ, ಈ ಸುಂಕ ಕೊಡಬೇಕಾಗುತ್ತದೆ. ಈ ರೀತಿಯ ಸುಂಕವನ್ನು ಸಮುದ್ರದ ತೀರದಲ್ಲಿರುವ ರೇವು ಪಟ್ಟಣಗಳಲ್ಲೂ ವಿಮಾನ ವಿಲ್ದಾಣಗಳಲ್ಲೂ ಗಡಿನಾಡಿನ ಉಕ್ಕಡಗಳಲ್ಲಿ ವಸೂಲು ಮಾಡಲಾಗುತ್ತದೆ.

	ಆಮದು ಸುಂಕಗಳು ಮೂರು ವಿಧ. ಮೊದಲನೆಯದಾಗಿ ಸರಕುಗಳ ಬೆಲೆಯ ಆಧಾರದ ಮೇಲೆ ವಿಧಿಸುವ ಸುಂಕ. ಇದಕ್ಕೆ ಅಡ್ ವಲೋರಂ ಡ್ಯೂಟಿ ಎಂದು ಹೆಸರು. ಇಲ್ಲಿ ಸರಕಿನ ಬೆಲೆಯ ಮೇಲೆ ನೂರಕ್ಕಿಷ್ಟರಂತೆ ಕೊಡಬೇಕಾಗುತ್ತದೆ. ಈ ಬೆಲೆಯನ್ನು ಗೊತ್ತುಮಾಡುವಾಗ ಆಮದಾದ ಸರಕನ್ನೇ ಹೋಲುವ ಸರಕು ದೇಶದ ಸಗಟು ವ್ಯಾಪರ ಸಂತೆಯಲ್ಲಿ ಯಾವ ದರದಲ್ಲಿ ಮಾರಾಟವಾಗುವುದೋ ಆ ದರವನ್ನು ಗಮನದಲ್ಲಿಡಲಾಗುತ್ತದೆ. ಈ ರೀತಿ ಬೆಲೆಯನ್ನು ನಿರ್ಧರಿಸುವುದು ಅನೇಕ ವೇಳೆ ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಕಳೆದ ಹನ್ನೆರಡು ತಿಂಗಳಲ್ಲೋ ಅಥವಾ ಇನ್ನಾವುದಾದರೂ ಗೊತ್ತಾದ ಅವಧಿಯಲ್ಲೊ ಯಾವ ಬೆಲೆಯಲ್ಲಿ ಆ ರೀತಿಯ ಸರಕುಗಳು ಆಮದಾಗಿರುತ್ತವೆಯೋ ಆ ಬೆಲೆಯನ್ನೇ ಮೂಲವಾಗಿ ಇಟ್ಟುಕೊಂಡು ಸುಂಕವನ್ನು ವಿಧಿಸಲಾಗುತ್ತದೆ. ಇದಕ್ಕೆ ಸುಂಕ ನಿರ್ಧಾರ (ಟ್ಯಾರಿಫ್ ವ್ಯಾಲುಯೇಷನ್) ಎಂದು ಹೆಸರು. 

	ಎರಡನೆ ರೀತಿಯದು ಸರಕಿನ ಬೆಲೆಯನ್ನವಲಂಬಿಸದೆ ಅದರ ಒಂದು ನಿಗದಿಯಾದ ಪ್ರಮಾಣದ ಆಧಾರದ ಮೇಲೆ ನಿಗದಿಯಾಗುತ್ತದೆ. ಹೇಗೆಂದರೆ ಬೆಲೆ ಎಷ್ಟಾದರೂ ಇರಲಿ, ಆಮದಾದ ಒಂದು ಪೌಂಡು ಅಥವಾ ಒಂದು ಕಿಲೋಗ್ರಾಮಿಗೆ ಕೊಡಬೇಕಾದ ಸುಂಕ ಒಂದಾಣೆ ಅಥವಾ ಎರಡಾಣೆ ಎಂದು ವಿಧಾಯಕವಾಗಿರುತ್ತದೆ. ಈ ರೀತಿಯ ಸುಂಕಕ್ಕೆ ನಿಗದಿಸುಂಕ (ಸ್ಪೆಸಿಫಿಕ್ ಡ್ಯೂಟಿ) ಎಂದು ಹೆಸರು. ಎರಡೂ ಬಳಕೆಯಲ್ಲಿದ್ದರೂ ಇವೆರಡರಲ್ಲಿ ಸರ್ಕಾರ ತನಗೆ ಆದಾಯ ಹೆಚ್ಚು ಬರುವ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸುತ್ತದೆ.

	 ಆಮದು ಸುಂಕಗಳನ್ನು ಹಾಕುವ ಉದ್ದೇಶ ಎರಡು ರೀತಿಯದಾಗಿರಬಹುದು. ಒಂದು, ಸರ್ಕಾರಕ್ಕೆ ಹೆಚ್ಚು ಅದಾಯವನ್ನೊದಗಿಸುವುದು. ಎರಡನೆಯದು, ದೇಶದಲ್ಲಿ ಬೆಳೆಯುತ್ತಿರುವ ಕೈಗಾರಿಕೆಗಳಿಗೆ ರಕ್ಷಣೆ ನೀಡುವುದು. ಈ ಎರಡು ಉದ್ದೇಶಗಳೂ ಪರಿಣಾಮದಲ್ಲಿ ಒಂದಕ್ಕೊಂದು ವಿರೋಧವಾದವುಗಳೆಂಬುದನ್ನು ಸುಲಭವಾಗಿ ತಿಳಿಯಬಹುದು. ಮೊದಲನೆಯ ಉದ್ದೇಶ ಸಾಧನೆಯಾಗಬೇಕಾದರೆ ಸರ್ಕಾರಕ್ಕೆ ಆಮದು ಬರುವ ಆದಾಯ ಹೆಚ್ಚಬೇಕು. ಎರಡನೆಯ ಉದ್ದೇಶ ಕೈಗೂಡಲು ಆಮದು ಕಡಿಮೆಯಾದರೂ ಅದರ ಬೆಲೆ ಹೆಚ್ಚಿರಬೇಕು. ಇವುಗಳ ಜೊತೆಗೆ ಮೂರನೆಯ ಒಂದು ಪದ್ಧತಿ ಕಾಮನ್‍ವೆಲ್ತ್ ರಾಷ್ಟ್ರಗಳಲ್ಲೂ ಇನ್ನೂ ಕೆಲವು ದೇಶಗಳಲ್ಲೂ ಜಾರಿಯಲ್ಲಿದೆ. ಇದನ್ನು ರಿಯಾಯಿತಿ ಸುಂಕ (ಪ್ರಿಫರೆಂಷಿಯಲ್ ಟ್ಯಾಸರಿಪ್) ಪದ್ಧತಿ ಕರೆಯಬಹುದು. ಈ ಪದ್ಧತಿಯಲ್ಲಿ ತಮಗೆ ಇಷ್ಟವಾದ ದೇಶಗಳಿಂದ ಬರುವ ಸರಕುಗಳ ಮೇಲೆ ವಿಧಿಸುವ ಸುಂಕದ ದರ ಮಿಕ್ಕೆಲ್ಲ ದೇಶಗಳಿಂದ ಬರುವ ಸರಕುಗಳ ಮೇಲೆ ವಿಧಿಸುವ ಸುಂಕದ ದರಕ್ಕಿಂತ ಕಡಿಮೆಯಾಗಿರುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಪರದೇಶಗಳು ತಮ್ಮ ಸರಕುಗಳ ರಫ್ತನ್ನು ಹೆಚ್ಚಿಸಲು ಪ್ರೋತ್ಸಾಹ ದ್ರವ್ಯ (ಸಬ್ಸಿಡಿ, ಚಾರಿಟಿ) ಕೊಡುತ್ತಿರಬಹುದು. ಈ ರೀತಿ ಪ್ರೋತ್ಸಾಹಿತವಾದ ಸರಕುಗಳಿಂದ ಸ್ವದೇಶದಲ್ಲಿ ತಯಾರಾದ ಸರಕುಗಳಿಗೆ ಪೈಪೋಟಿ ಉಂಟಾಗುತ್ತದೆ. ಇಂಥ ಪೈಪೋಟಿಯನ್ನು ತಡೆಗಟ್ಟುವ ಉದ್ದೇಶದಿಂದಲೂ ಸುಂಕಗಳನ್ನು ವಿಧಿಸಬಹುದು. ಈ ಸುಂಕಗಳಿಗೆ ಈಡು ತೆರಿಗೆ (ಕೌಂಟ್‍ವೇಲಿಂಗ್ ಡ್ಯೂಟೀಸ್) ಎಂದು ಹೆಸರು. ಸಾಮಾನ್ಯವಾಗಿ ಇರುವ ಸುಂಕದ ಜೊತೆಗೆ ಪರದೇಶಗಳಲ್ಲಿ ಕೊಡಲಾಗುವ ಪ್ರೋತ್ಸಾಹ ದ್ರವ್ಯದ ಮೊತ್ತಕ್ಕೆ ಸರಿಗಟ್ಟುವಂತೆ ಈ ಸುಂಕಗಳನ್ನು ವಿಧಿಸಲಾಗುತ್ತದೆ. 

	ಮೊದಮೊದಲು ಆಮದು ಸುಂಕ್ಕಕಿಂತ ರಫ್ತು ಸುಂಕ ಹೆಚ್ಚು ಚಾಲ್ತಿಯಲ್ಲಿತ್ತು. ಇದರ ಮುಖ್ಯ ಉದ್ದೇಶ ದೇಶದಲ್ಲಿ ತಯಾರಾದ ಸರಕುಗಳನ್ನು ಹೊರಗೆ ಹೋಗಲು ಅಸ್ಪದ ಕೊಡದೆ, ದೇಶದ ಜನತೆಯ ಉಪಯೋಗಕ್ಕಾಗಿ ಉಳಿಸಿಕೊಳ್ಳುವುದೇ ಆಗಿದ್ದಿತ್ತು. ಈಗ ಈ ರಫ್ತು ಸುಂಕಗಳು ಮೊದಲಿನಷ್ಟು ಉಪಯೋಗದಲ್ಲಿಲ್ಲ. ಇದ್ದರೂ ಇದಕ್ಕೊಳಪಟ್ಟ ಸಾಮಾನುಗಳ ಸಂಖ್ಯೆ ತುಂಬ ಕಡಿಮೆ ಮತ್ತು ಈ ಸುಂಕಗಳ ಉದ್ದೇಶ ಸರ್ಕಾರಕ್ಕೆ ಹೆಚ್ಚು ಆದಾಯವನ್ನೊದಗಿಸುವುದು.
ಸುಂಕ ಪದ್ಧತಿಯನ್ನು ಅನುಸರಿಸುತ್ತಿರುವ ದೇಶಗಳಲ್ಲಿ ಮೂರು ಗುಂಪನ್ನು ಗುರುತಿಸಬಹುದು. ಮೊದಲನೆಯ ಗುಂಪಿನಲ್ಲಿರುವ ದೇಶದಲ್ಲಿ ಸುಂಕ ಹಾಕುವ ಮುಖ್ಯ ಉದ್ದೇಶ ಸರಕಾರಕ್ಕೆ ಹೆಚ್ಚು ಹೆಚ್ಚು ವರಮಾನವನ್ನೊದಗಿಸುವುದು. ಇಲ್ಲೂ ಕೈಗಾರಿಕೆಗಳಿಗೆ ರಕ್ಷಣೆ ದೊರೆಯಬಹುದಾದರೂ ಈ ರಕ್ಷಣೆ ಉದ್ದೇಶಪೂರ್ವಕವಾದುದಲ್ಲ. ಸಾಮಾನ್ಯವಾಗಿ ಕೃಷಿ ಅಥವಾ ಕೃಷಿ ಸಂಬಂಧವಾದ ವೃತ್ತಿಗಳೇ ಪ್ರಧಾನವಾಗಿರುವ ಆಸ್ಟ್ರೇಲಿಯ ಮುಂತಾದ ರಾಷ್ಟ್ರಗಳು ಈ ಗುಂಪಿಗೆ ಸೇರುತ್ತವೆ. ಎರಡನೆಯ ಗುಂಪಿನಲ್ಲಿ ಬರುವ ದೇಶಗಳು ಸ್ವದೇಶದ ಕೈಗಾರಿಕೆಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಕೆಲವು ಸರಕುಗಳ ಮೇಲೆ ಸುಂಕ ಹಾಕಲುಬಾರದಂಥ ದೇಶಗಳು, ಬೆಳೆದು ತಲೆ ಎತ್ತಿ ನಿಂತಿರುವ ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ಮಾಲುಗಳನ್ನು ಎಲ್ಲೆಲ್ಲಿಂದ ಸಾಧ್ಯವೋ ಅಲ್ಲಿಂದೆಲ್ಲಾ ಆದಷ್ಟು ಅಗ್ಗವಾಗಿ ಆಮದು ಮಾಡಿಕೊಳ್ಳಲು ಯತ್ನಿಸುತ್ತಿರುವ ಇಂಗ್ಲೆಂಡ್ ಮುಂತಾದ ರಾಷ್ಟ್ರಗಳು ಮೂರನೆಯ ಗುಂಪಿನವು. 
ಸುಂಕ ಪದ್ಧತಿಯ ಚರಿತ್ರೆಯಲ್ಲಿ ಮುಖ್ಯವಾದ ಘಟ್ಟಗಳನ್ನು ಇಲ್ಲಿ ಸ್ಥೂಲವಾಗಿ ಚಿತ್ರಿಸಬಹುದು. 1789 - 1815 ರಲ್ಲಿ ಅವಧಿ ನೆಪೋಲಿಯನ್ನನ ವ್ಯಕ್ತಿತ್ವ ಐರೋಪ್ಯ ರಾಷ್ಟ್ರಗಳ ವಿಕಾಸದ ಮೇಲೆ ಪ್ರಭಾವ ಬೀರುತ್ತಿದ್ದ ಕಾಲ. ಈ ಅವಧಿಯಲ್ಲಿ ಯುದ್ಧಕ್ಕೆ ಬೇಕಾದ ಹಣವನ್ನೊದಗಿಸುವುದೇ ಈ ರಾಷ್ಟ್ರಗಳ ಸುಂಕ ನೀತಿಯ ಪರಮೋದ್ದೇಶವಾಗಿತ್ತು. ಆದುದರಿಂದ ಸುಂಕಗಳ ಮಟ್ಟ ವರ್ಷ ವರ್ಷಕ್ಕೆ ಏರುತ್ತಲೇ ಬಂತು. 

ಮುಂದಿನ ಘಟ್ಟ 1815ರಿಂದ ಪ್ರಾರಂಭವಾಗಿ 1870 ರ ವರೆಗೆ ಬಲಿಷ್ಠ ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕಗಳ ಜೊತೆಗೆ, ಜರ್ಮನಿಯೂ ರಾಷ್ಟ್ರದ ಏಕೀಕರಣವನ್ನು ಸಾಧಿಸಿ, ತಲೆ ಎತ್ತಿತ್ತು. ಆ ದೇಶಗಳಂತೆಯೇ ಜರ್ಮನಿಯಲ್ಲೂ ಸುಂಕ ಪದ್ಧತಿಯನ್ನು ಜಾರಿಗೆ ತರಲಾಯಿತು. ಹಾಲೆಂಡ್ ಮತ್ತು ಸ್ವಿಟ್ಜರ್ಲೆಂಡ್ ದೇಶಗಳೂ ಈ ಪದ್ಧತಿಯನ್ನು ಜಾರಿಗೆ ತಂದುವು. ಎಚ್ಚೆತ್ತ ಕೂಲಿಕಾರರ ತಂಡಕ್ಕೆ ಸುಲಭ ಬೆಲೆಯಲ್ಲಿ ಆಹಾರ ಧಾನ್ಯಗಳನ್ನೊದಗಿಸಲು ಇಂಗ್ಲೆಂಡು ಧಾನ್ಯಗಳ ಆಮದಿನ ಮೇಲೆ ಸುಂಕವನ್ನು ಕ್ರಮೇಣ ಕಡಿಮೆ ಮಾಡಿ 1845 ರಲ್ಲಿ ಸಂಪೂರ್ಣವಾಗಿ ರದ್ದು ಮಾಡಿತು. 1846 ರ ವೇಳೆಗೆ ಅಮೆರಿಕ, ಮತ್ತು 1952ರಲ್ಲಿ ಫ್ರಾನ್ಸ್ ದೇಶಗಳಲ್ಲಿ ಆಮದು ಸುಂಕವನ್ನು ಕಡಿಮೆ ಮಾಡಿ ತಡೆಯಿಲ್ಲದ ವ್ಯಾಪಾರ ನೀತಿಯನ್ನು ಅನುಸರಿಸಲಾಯಿತು.
1871ರಿಂದ 1914ರ ವರೆಗೆ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಈ ನೀತಿಯನ್ನೇ ಮುಂದುವರಿಸಿಕೊಂಡು ಬರಲಾಯಿತು. ಜರ್ಮನಿಯಲ್ಲಿ ಕೂಡ ಕೈಗಾರಿಕಾ ಕ್ರಾಂತಿ ಒಂದು ಮಟ್ಟಕ್ಕೆ ಬಂದಾಗ ಸುಂಕದ ದರವನ್ನು ಇಳಿಸಲು ಸಾಧ್ಯವಾಯಿತು. ಅಮೆರಿಕದಲ್ಲಿ ಮಾತ್ರ 1865ರಲ್ಲಿ ಕೊನೆಗೊಂಡ ಒಳಯುದ್ಧದ ಅನಂತರ ರಕ್ಷಣಾನೀತಿ ಬಲಗೊಂಡು ಆಮದು ಸುಂಕಗಳನ್ನು ಹೆಚ್ಚಿಸಲಾಯಿತು. 

1914 - 18ರ ಮಹಾಯುದ್ಧದ ಕಾಲದಲ್ಲಿ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅನೇಕ ವಿಧವಾದ ತಡೆಗಳು ಜಾರಿಗೆ ಬಂದು ಸುಂಕ ಪದ್ಧತಿ ಹೆಚ್ಚು ಪರಿಣಾಮಕಾರಿಯಾಗಲಿಲ್ಲ.

ಯುದ್ಧ ಮುಗಿದ ಮೇಲೆ ಬಂದ 1921 - 30ರ ದಶಕದಲ್ಲಿ ಸುಂಕ ಪದ್ಧತಿಗೆ ಮತ್ತೆ ಪ್ರಾಮುಖ್ಯ ದೊರೆಯಿತು. ಇದಕ್ಕೆ ಕಾರಣ ಸ್ವದೇಶದ ಕೈಗಾರಿಕೆಗಳನ್ನು ಬೆಳೆಸಬೇಕೆಂಬ ಎಲ್ಲೆಲ್ಲೂ ತಲೆ ಎತ್ತಿದ ತೀವ್ರ ಆಕಾಂಕ್ಷೆ. ಇದರ ಪರಿಣಾಮವಾಗಿ ಅನೇಕ ದೇಶಗಳಲ್ಲಿ ಆಮದು ಸುಂಕಗಳನ್ನು ಏರಿಸಲಾಯಿತು. 1914ಕ್ಕೆ ಮುಂಚೆ ಶೇಕಡ ಮೂವತ್ತಕ್ಕೂ ಮೀರಿದ ಸುಂಕ ಎಲ್ಲೋ ಅಲ್ಲೊಂದು ಇಲ್ಲೊಂದು ಮಾತ್ರ ಇತ್ತು. 1931ರ ವೇಳೆಗೆ ಈ ದರವೇ ಕನಿಷ್ಠ ಪ್ರಮಾಣವಾಗಿ ಪರಿಣಮಿಸಿ ಶೇಕಡ ಮೂವತ್ತು ಅಥವಾ ನಲವತ್ತರ ಮಟ್ಟ ಸರ್ವೇಸಾಧಾರಣವಾಯಿತು. ಇತರ ಮುಂದುವರೆದ ಐರೋಪ್ಯ ರಾಷ್ಟ್ರಗಳು ಕೃಷಿ ಸಂಬಂಧವಾದ ಸರಕುಗಳ ಮೇಲಿನ ಆಮದು ಸುಂಕವನ್ನು ಶೇಕಡ ಐವತ್ತರ ತನಕ ಏರಿಸಿದ್ದರೆ, ಜರ್ಮನಿ ಇನ್ನೂ ಮುಂದುವರಿದು, ಈ ಸುಂಕವನ್ನು ಶೇಕಡ 82.5ಕ್ಕೆ ಹೆಚ್ಚಿಸಿತು. ಅಮೆರಿಕದಲ್ಲಿ ಕೂಡ ಈ ಪ್ರವೃತ್ತಿ ಕಂಡುಬಂದಿತು. ಉದಾಹರಣೆಗಾಗಿ 1930ರಲ್ಲಿ ಜಾರಿಗೆ ಬಂದ ಹಾಲಿ ಸ್ಮೂಟ್ ಟ್ಯಾರಿಫನಲ್ಲಿ ಆಮದು ಸುಂಕಗಳನ್ನು ಏರಿಸಲಾದ ಸರಕುಗಳ ಸಂಖ್ಯೆ 900 ಕ್ಕೂ ಮೀರಿತ್ತು. 
1932- 39ರ ಅವಧಿಯಲ್ಲಿ ಆರ್ಥಿಕ ಮುಗ್ಗಟ್ಟು ಎಲ್ಲೆಲ್ಲೂ ತಲೆದೋರಿ ಅದನ್ನು ನಿವಾರಿಸಲು ಹಲವು ಪ್ರದೇಶಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ತೀವ್ರವಾದ ತಡೆಗಳನ್ನು ಒಡ್ಡಲಾಯಿತು. ಮುಂದೆ 1939 - 45ರಲ್ಲಿ ಎರಡನೆಯ ಮಹಾ ಯುದ್ಧದ ಪರಿಣಾಮವಾಗಿ ಅಂತರರಾಷ್ಟ್ರೀಯ ವ್ಯಾಪಾರ ನೇರವಾಗಿ ಸರ್ಕಾರಗಳ ಕೈಗೆ ಬಂತು. ಈ ಪರಿಸ್ಥಿತಿಯಲ್ಲಿ ಸುಂಕ ಪದ್ಧತಿಯ ಅವಶ್ಯಕತೆ ಹೆಚ್ಚಾಗಿ ಬೀಳಲಿಲ್ಲ. ಯುದ್ಧ ಮುಗಿದ ಮೇಲೆ ಇಲ್ಲಿಯವರೆಗೆ, ಅಂತರಾಷ್ಟ್ರೀಯ ವ್ಯಾಪಾರಕ್ಕೆ ಇರುವ ಅಡಚಣೆಗಳನ್ನು ಸಾಧ್ಯವಾದಷ್ಟು ತೆಗೆದು ಹಾಕಿ ಈ ವ್ಯಾಪಾರ ಸಲೀಸಾಗಿ ನಡೆಯಲು ಬೇಕಾದ ಹಿನ್ನೆಲೆಯನ್ನು ಕಲ್ಪಿಸಲು ಸುಂಕಗಳನ್ನು ಕಡಿಮೆ ಮಾಡುವುದೂ ಒಂದು ಮುಖ್ಯವಾದ ಸಾಧನವೆಂಬುದನ್ನು ರಾಷ್ಟ್ರಗಳು ಮನಗಂಡಿವೆ. 1947ರಿಂದ ಕೆಲಸ ಮಾಡುತ್ತಿರುವ ಗ್ಯಾಟ್ (ಜನರಲ್ ಅಗ್ರಿಮೆಂಟ್ ಆನ್ ಟ್ಯಾರಿಫ್ಸ್ ಅಂಡ್ ಟ್ರೇಡ್, 1948.) ಮತ್ತು ಇನ್ನಿತರ ಅಂತರರಾಷ್ಟ್ರೀಯ ಸಂಸ್ಥೆಗಳು ಕ್ರಮೇಣ ಪರಸ್ಪರವಾಗಿ ಸುಂಕಗಳನ್ನು ಇಳಿಸಲು ಶ್ರಮಿಸುತ್ತಿವೆ. 
										
 (ಎ.ಎಸ್.ಎಲ್.)
ಪರಿಷ್ಕರಣೆ : ಜಿ ಎಸ್ ಶ್ರೀನಾಥ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ